ನವಾಬರು, ಕರ್ಣಾಟಕದ

ಯೂರೋಪಿಯನರು ಕರ್ಣಾಟಿಕ ಎಂದು ಕರೆಯುತ್ತಿದ್ದ, ದಕ್ಷಿಣ ಭಾರತದ ಕೋರಮಂಡಲ ತೀರ ಮತ್ತು ಅದರ ಹಿನ್ನಾಡಿನ, ಪ್ರದೇಶದಲ್ಲಿ ಆಳಿದ ನವಾಬರು, ಹದಿನೆಂಟನೆಯ ಶತಮಾನದ ಭಾರತದ ರಾಜಕೀಯ ಗೊಂದಲಮಯವಾದ್ದಾಗಿತ್ತು. ಮೊಗಲ್ ಆಧಿಪತ್ಯ ಅವನತಿಯ ಹಾದಿಯಲ್ಲಿತ್ತು. ಈ ಅಸ್ತವ್ಯಸ್ತ ಪರಿಸ್ಥಿತಿಯಲ್ಲಿ ಅನೇಕ ರಾಜ್ಯಾಕಾಂಕ್ಷೆಯ ವ್ಯಕ್ತಿಗಳು ಸ್ವತಂತ್ರ ರಾಜ್ಯಗಳನ್ನು ಕಟ್ಟಿಕೊಳ್ಳಲು ಅವಕಾಶ ಒದಗಿಬಂದಿತ್ತು. ದಖನ್ನಿನಲ್ಲಿ ನಿಜಾಮ್-ಉಲ್-ಮುಲ್ಕ್ ಅಸಾಫ್ ಜಾಹ್ ಸ್ವತಂತ್ರನಾಗಿದ್ದ. ದಖನ್ ಪ್ರಾಂತ್ಯದ ಬಹುಮುಖ್ಯ ಭಾಗವಾದ ಕರ್ಣಾಟಕ ಪ್ರದೇಶ ನಿಜಾಮನ ಆಳ್ವಿಕೆಯಲ್ಲಿ ಸಂದಿಗ್ಧ ಸ್ಥಿತಿಯಲ್ಲಿತ್ತು. ಮೊದಲು ದೆಹಲಿಗೂ ಅನಂತರ ನಿಜಾಮನಿಗೂ ಅಧೀನರಾಗಿ ಕರ್ಣಾಟಕದಲ್ಲಿ ರಾಜಧಾನಿಯಾದ ಆರ್ಕಾಟಿನಿಂದ ಈ ನವಾಬರು ಆಡಳಿತ ನಡೆಸುತ್ತಿದ್ದರು. ಆದ್ದರಿಂದ ಆರ್ಕಾಟಿನ ನವಾಬರೆಂದೂ ಇವರು ಪ್ರಸಿದ್ಧರಾಗಿದ್ದಾರೆ. ಕರ್ಣಾಟಿಕದ ಮೊದಲನೆಯ ನವಾಬ ಜುಲ್‍ಫಕರ್ ಅಲಿ ಖಾನನನ್ನು (ಸು. 1690-1703) ನೇಮಿಸಿದ್ದವನು ದೆಹಲಿಯ ಮೊಗಲ್ ಚಕ್ರವರ್ತಿ ಔರಂಗ್‍ಜೇಬ್. ಅನಂತರ ದಾವೂದ್ ಖಾನ್ 1703-1710ರಲ್ಲಿ ಆಡಳಿತ ನಡೆಸಿದ. ಮಹಮ್ಮದ್ ಸಯ್ಯಿದ್ ಸಾದತ್-ಉಲ್ಲಾ ಖಾನನೂ (1710-1732) ದೋಸ್ತ್ ಅಲಿ ಖಾನನೂ (1732-1740) ಅನಂತರ ಬಂದವರು. ಸುಮಾರು ಈ ಕಾಲದಲ್ಲಿ ಹೈದರಾಬಾದಿನ ನಿಜಾóಮ ಅಸಾಫ್ ಜಾಹ್ ಸ್ವತಂತ್ರನಾದ. ದೆಹಲಿಯ ಚಕ್ರವರ್ತಿಯ ಅಧಿಕಾರವನ್ನೆಲ್ಲ ದಖನ್ನಿನಲ್ಲಿ ಚಲಾಯಿಸತೊಡಗಿದ್ದ ನಿಜಾóಮ ಆರ್ಕಾಟಿನ ನವಾಬನನ್ನು ನೇಮಿಸುವ ಅಧಿಕಾರವನ್ನೂ ಪಡೆದುಕೊಂಡಿದ್ದ. ಕ್ರಮೇಣ ದೋಸ್ತ್ ಅಲಿ ಸ್ವತಂತ್ರನಾಗಿ ವರ್ತಿಸತೊಡಗಿದ. ಹದಿನೆಂಟನೆಯ ಶತಮಾನದ 
ಮಧ್ಯಭಾಗದ ವೇಳೆಗೆ ಪೇಶ್ವೆಗಳ ನೇತೃತ್ವದಲ್ಲಿ ಪ್ರಬಲ ಶಕ್ತಿಯಾಗಿ ಬೆಳೆದ ಮರಾಠರು ಕರ್ಣಾಟಿಕ ಪ್ರಾಂತ್ಯದ ಮೇಲೆ ದಾಳಿ ನಡೆಸಿ ನವಾಬ ದೋಸ್ತ್ ಅಲಿಯನ್ನು ಕೊಂದು ಆತನ ಅಳಿಯ ಚಂದಾ ಸಾಹೇಬನನ್ನು ಸೆರೆಹಿಡಿದು ಸಾತಾರಕ್ಕೆ ಕೊಂಡೊಯ್ದರು. ನವಾಬ್ ದೋಸ್ತ್ ಅಲಿಯ ಮಗ ಸಫ್ದರ್ ಅಲಿ ಖಾನ್ ಮರಾಠರಿಗೆ ಒಂದು ಕೋಟಿ ರೂಪಾಯಿ ಕಪ್ಪವನ್ನು ಕೊಡುವುದಾಗಿ ಹೇಳಿ ತನ್ನ ಜೀವ ಮತ್ತು ರಾಜ್ಯವನ್ನು ಉಳಿಸಿಕೊಂಡ (1740-1742). ಆದರೆ ಮರಾಠರು ಸಫ್ದರ್ ಅಲಿಯನ್ನು ಕೊಂದು ಆತನ ಮಗ 2ನೆಯ ಸಾದತ್-ಉಲ್ಲಾ ಖಾನನ್ನು ನವಾಬನೆಂದು ಘೋಷಿಸಿದರು. ಈ ಘಟನೆಗಳು ಕರ್ಣಾಟಿಕ ಪ್ರಾಂತ್ಯದಲ್ಲಿ ಅನಿಶ್ಚಿತ ಪರಿಸ್ಥಿತಿಯನ್ನು ಉಂಟುಮಾಡಿದುವು. ಸಂಪೂರ್ಣ ದಖನ್ನಿನ ಒಡೆಯನೆನಿಸಿಕೊಂಡಿದ್ದ ನಿಜಾóಮ ಅನ್ವರುದ್ದೀನನನ್ನು ಕರ್ಣಾಟಿಕದ ನವಾಬನಾಗಿ ನೇಮಕ ಮಾಡಿದ (1744). ಆದರೆ ದೋಸ್ತ್ ಅಲಿಯ ಅನೇಕ ಸಂಬಂಧಿಕರಿಗೆ ಮತ್ತು ಮಿತ್ರರಿಗೆ ಅವನ ಆಯ್ಕೆ ಸಮ್ಮತವಾಗಲಿಲ್ಲ. ಅವರು ಅನೇಕ ಕೋಟೆ ಮತ್ತು ಜಾಗೀರುಗಳ ಆಡಳಿತ ನಡೆಸುತ್ತಿದ್ದರು. ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು.
 
   	ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತಕ್ಕೆ ವ್ಯಾಪಾರೋದ್ದೇಶದಿಂದ ಬಂದಿದ್ದ ಇಂಗ್ಲಿಷರು, ಫ್ರೆಂಚರು ಮುಂತಾದ ಐರೋಪ್ಯರು ಸ್ಥಳೀಯ ರಾಜರ ಆಂತರಿಕ ವ್ಯವಹಾರಗಳಲ್ಲಿ ಕೈಹಾಕತೊಡಗಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿದರು. ಅವರು ಕರ್ಣಾಟಿಕದಲ್ಲಿ ಯುದ್ಧಾಸಕ್ತರಾಗಿ, ನವಾಬ ಅದರಲ್ಲಿ ಸಿಕ್ಕಿಕೊಳ್ಳುವಂತೆ ಮಾಡಿದರು. ಅವನು ತನ್ನ ರಾಜ್ಯವನ್ನೂ ಅಧಿಕಾರವನ್ನೂ ಭದ್ರಪಡಿಸಿಕೊಳ್ಳಲು ಈ ಹೋರಾಟದಲ್ಲಿ ಪ್ರವೇಶಿಸಲೇಬೇಕಾಯಿತು.

    	ಮರಾಠರು 1748ರಲ್ಲಿ ಚಂದಾ ಸಾಹೇಬನನ್ನು ಬಿಡುಗಡೆ ಮಾಡಿದಾಗ ಕರ್ಣಾಟಿಕದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಅವನು ತನ್ನ ಮಾವನ ಸಿಂಹಾಸನವನ್ನು ಪಡೆಯಲು ಪಿತೂರಿ ಹೂಡಿದ. ದಖನ್ನಿನಲ್ಲೂ ಇಂಥದೇ ಮತ್ತೊಂದು ಸಮಸ್ಯೆ ಉದ್ಭವಿಸಿತು. ಅಸಾಫ್ ಜಾಹನ ಮರಣದಿಂದಾಗಿ ಹೈದರಾಬಾದಿನಲ್ಲಿ ಉತ್ತರಾಧಿಕಾರಕ್ಕಾಗಿ ಮುಜಾಫರ್ ಜಂಗ್ ಮತ್ತು ನಾಸಿರ್ ಜಂಗರ ನಡುವೆ ಕಲಹ ಏರ್ಪಟ್ಟಿತು. ಇಂಥ ಅವಕಾಶಕ್ಕಾಗಿ ಕಾಯುತ್ತಿದ್ದ ಫ್ರೆಂಚ್ ಗವರ್ನರ್-ಜನರಲ್ ಡೂಪ್ಲೆಕ್ಸ್ (ಡೂಪ್ಲೆ) ಕರ್ಣಾಟಿಕದ ಚಂದಾ ಸಾಹೇಬ್ ಮತ್ತು ಮುಜಾóಫರ್ ಜಂಗನೊಡನೆ ಪ್ರತ್ಯೇಕ ರಹಸ್ಯ ಒಪ್ಪಂದಗಳನ್ನು ಮಾಡಿಕೊಂಡು ಅವರ ಸಿಂಹಾಸನಗಳನ್ನು ಮರಳಿ ಗಳಿಸಿಕೊಡುವುದಾಗಿ ಆಶ್ವಾಸನೆ ನೀಡಿದ. ಈ ಮೂವರೂ ಕೂಡಿಕೊಂಡು 1749ರ ಆಗಸ್ಟ್ 3ರಂದು ಆರ್ಕಾಟಿನ ನವಾಬ ಅನ್ವರ್-ಉದ್-ದೀನನನ್ನು ಅಂಬರ್ ಕದನದಲ್ಲಿ ಕೊಂದರು. ಅವನ ಮಗ ಮಹಮ್ಮದ್ ಅಲಿ ತಿರುಚಿನಾಪಳ್ಳಿಗೆ ತಪ್ಪಿಸಿಕೊಂಡು ಹೋಗಿ ಅಲ್ಲಿಯ ಕೋಟೆಯಲ್ಲಿ ರಕ್ಷಣೆ ಪಡೆದ. ಚಂದಾ ಸಾಹೇಬ ಮತ್ತು ಮುಜಾóಫರ್ ಜಂಗರಿಗೆ ಸಿಂಹಾಸನಗಳು ದೊರಕಿದವು. ಚಂದಾ ಸಾಹೇಬ ಆರ್ಕಾಟಿನ ನವಾಬನಾದ.

    	ಆದರೆ ಡೂಪ್ಲೆಕ್ಸ್ ಮತ್ತು ಅವನ ಮಿತ್ರರ ಕೂಟದ ವಿಜಯ ಬಹುಕಾಲ ಉಳಿಯಲಿಲ್ಲ. ಫ್ರೆಂಚರಿಂದ ತಮಗೆ ಉಂಟಾದ ಅಪಾಯಕಾರಿ ಪರಿಸ್ಥಿತಿಯನ್ನು ಇಂಗ್ಲಿಷರು ಬಹು ಬೇಗ ಮನಗಂಡರು. ಅವರು ಕೂಡಲೆ ಮುಹಮ್ಮದ್ ಅಲಿಯ ಪಕ್ಷ ವಹಿಸಿ ಅವನಿಗೆ ಸಹಾಯ ಮಾಡಿದರು. ಇಂಗ್ಲಿಷರು ಆರ್ಕಾಟ್ ಕೋಟೆಗೆ ಮುತ್ತಿಗೆ ಹಾಕಿ ಚಂದಾ ಸಾಹೇಬನನ್ನು ಕೊಂದು, ಮುಹಮ್ಮದ್ ಅಲಿಯನ್ನು ಕರ್ಣಾಟಿಕದ ನವಾಬನನ್ನಾಗಿ ಮಾಡಿದರು (1749).

    	ಇಂಗ್ಲಿಷರ ಮತ್ತು ಫ್ರೆಂಚರ ಈ ಪೈಪೋಟಿಯಿಂದಾಗಿ ಕರ್ಣಾಟಕ ಅಪಾರ ನಷ್ಟ ಅನುಭವಿಸಿತು. ಇಂಗ್ಲಿಷರ ನೆರವಿನಿಂದ ನವಾಬನೆನಿಸಿಕೊಂಡ ಮುಹಮ್ಮದ್ ಅಲಿ ದಕ್ಷ ಆಡಳಿತಗಾರನಾಗಿರಲಿಲ್ಲ. ಅವನು ವಿಷಯಲಂಪಟನಾಗಿದ್ದ. ರಾಜ್ಯದ ವರಮಾನವನ್ನು ಸ್ವಂತ ಭೋಗವೈಭವಗಳಿಗಾಗಿ ವೆಚ್ಚ ಮಾಡುತ್ತಿದ್ದ. ಅದೂ ಸಾಲದಾದಾಗ ಅವನು ಅಧಿಕ ಬಡ್ಡಿ ದರದಲ್ಲಿ ಇಂಗ್ಲಿಷ್ ಕಂಪನಿಯಿಂದ ಅಪಾರ ಸಾಲ ಪಡೆದ. ಇದಕ್ಕೆ ಪ್ರತಿಯಾಗಿ ಇಂಗ್ಲಿಷ್ ಕಂಪನಿಗೆ ಕರ್ಣಾಟಿಕದ ಕೆಲವು ಜಿಲ್ಲೆಗಳ ಭೂಕಂದಾಯವನ್ನು ಬಿಟ್ಟುಕೊಟ್ಟ. ಈ ಜಿಲ್ಲೆಗಳಲ್ಲಿ ಆಡಳಿತ ವ್ಯವಸ್ಥೆ ದುರ್ಬಲಗೊಂಡು ನವಾಬನ ಪ್ರಭಾವ ಮತ್ತು ಅಧಿಕಾರಗಳು ಕಡಿಮೆಯಾಗಿ ಬ್ರಿಟಿಷರ ಪ್ರಭಾವ ಅಧಿಕವಾಯಿತು. ನವಾಬನ ಮತ್ತು ಇಂಗ್ಲಿಷರ ನಡುವಣ ಸಂಬಂಧ ವಿಷಮಿಸಿತು. ಇಂಗ್ಲಿಷರು 1787ರಲ್ಲಿ ನವಾಬನೊಡನೆ ಒಂದು ಒಪ್ಪಂದ ಮಾಡಿಕೊಂಡರು. 15 ಲಕ್ಷ ಪಗೋಡಗಳನ್ನು ನವಾಬನಿಗೆ ಸಹಾಯಧನವಾಗಿ ನೀಡಿ ಕರ್ಣಾಟಿಕದ ರಕ್ಷಣೆಯ ಜವಾಬ್ದಾರಿಯನ್ನು ಅವರು ತೆಗೆದುಕೊಂಡರು. ಟಿಪ್ಪುವಿನೊಂದಿಗಿನ ಯುದ್ಧದ ಕಾಲದಲ್ಲಿ (1790-1792) ಕರ್ಣಾಟಕದ ಸಂಪೂರ್ಣ ಹತೋಟಿಯನ್ನು ಕಂಪನಿ ಸರಕಾರ ತನ್ನ ವಶಕ್ಕೆ ತೆಗೆದುಕೊಂಡಿತು. ಯುದ್ಧ ಅಂತ್ಯಗೊಂಡ ಅನಂತರ 1792ರ ಜುಲೈ 12ರಂದು ನವಾಬನ ಮತ್ತು ಇಂಗ್ಲಿಷರ ನಡುವೆ ಮತ್ತೊಂದು ಒಪ್ಪಂದ ಏರ್ಪಟ್ಟಿತು. ನವಾಬ ಮತ್ತೆ ಕರ್ಣಾಟಕದ ಅಧಿಕಾರ ಪಡೆದ. ಬ್ರಿಟಿಷರಿಗೆ ರಕ್ಷಣಾ ವೆಚ್ಚಕ್ಕಾಗಿ ನೀಡಬೇಕಾದ ಮೊತ್ತವನ್ನು 9 ಲಕ್ಷ ಪಗೋಡಗಳಿಗೆ ಇಳಿಸಲಾಯಿತು.

    	ಮಹಮ್ಮದ್ ಅಲಿ 1795ರ ಅಕ್ಟೋಬರ್ 13ರಂದು ಮರಣ ಹೊಂದಿದ. ಅವನ ಮಗ ಉಮ್‍ದತ್-ಉಲ್-ಉಮ್ರ ನವಾಬನಾದ. ಇವನ ಕಾಲದಲ್ಲೂ ಕರ್ಣಾಟಿಕದ ಪರಿಸ್ಥಿತಿ ಉತ್ತಮಗೊಳ್ಳದೆ ಆಡಳಿತದ ನ್ಯೂನತೆಗಳು ಮುಂದುವರಿದವು. ಲಾರ್ಡ್ ವೆಲ್‍ಸ್ಲಿ ಗವರ್ನರ್-ಜನರಲ್ ಆಗಿ ಅಧಿಕಾರಕ್ಕೆ ಬಂದಾಗ ಕರ್ಣಾಟಿಕವನ್ನು ಕಂಪನಿ ಸರ್ಕಾರದ ನೇರ ಆಡಳಿತಕ್ಕೆ ಒಳಪಡಿಸಲು ನಿಶ್ಚಯಿಸಿದ. ಉಮ್‍ದತ್-ಉಲ್-ಉಮ್ರ 1801ರಲ್ಲಿ ತೀರಿಕೊಂಡ. ಅವನ ಉತ್ತರಾಧಿಕಾರಿಯಾದ ಅವನ ಮಗ ಅಲಿ ಹುಸೇನನನ್ನು ಲಾರ್ಡ್ ವೆಲ್‍ಸ್ಲಿ ಕಡೆಗಣಿಸಿ ಉಮ್ರನ ದಾಯಾದಿ ಅಜೀóಮ್-ಉದ್-ದೌಲನೊಡನೆ ಒಪ್ಪಂದ ಮಾಡಿಕೊಂಡು ಅವನನ್ನು ಕರ್ಣಾಟಕದ ನವಾಬನಾಗಿ ನೇಮಕ ಮಾಡಿದ. ಅಜೀಮ್-ಉದ್-ದೌಲನಿಗೆ ಕರ್ಣಾಟಿಕದ ಭೂಕಂದಾಯದ 1/5 ಭಾಗವನ್ನು ಸಂದಾಯ ಮಾಡಲು ಒಪ್ಪಿ ಸೈನಿಕ ಮತ್ತು ಪೌರಾಡಳಿತದ ಸಂಪೂರ್ಣ ಅಧಿಕಾರವನ್ನು ಬ್ರಿಟಿಷ್ ಕಂಪನಿ ವಹಿಸಿಕೊಂಡಿತು.									
	(ಎಸ್.ವೈ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ